ನಿಮ್ಮ ವ್ಯಕ್ತಿತ್ತವೇನು….?ಒಂದು ಚೀನೀ ಪದ್ಧತಿಯ ವಿಶ್ಲೇಷಣೆ

ಮಾನವನ ವ್ಯಕ್ತಿತ್ವವನ್ನು ಚೀನೀಯರು ಹನ್ನೆರಡು ಮುಖ್ಯ ಬಗೆಗಳಲ್ಲಿ ವಿಂಗಡಿಸಿದ್ದಾರೆ. ಅವುಗಳಿಗೆ ಸಾಂಕೇತಿಕವಾಗಿ ಪ್ರಾಣಿಗಳನ್ನು ಹೆಸರಿಸಿದ್ದಾರೆ. ಇದನ್ನು ಓದಿದಾಗ ಮನುಷ್ಯನು ತಾನೆಂಥ ಪ್ರಾಣಿ ಎಂದು ತಾನೇ ತಿಳಿದುಕೊಳ್ಳಬಹುದು.

ಇದು ಭವಿಷ್ಯವಲ್ಲ, ನಿಮ್ಮ ಒಳಿತು – ಕೆಡುಕು, ಸಾಮರ್ಥ್ಯ – ದೌರ್ಬಲ್ಯಗಳನ್ನು ತಿಳಿಯಬಹುದಾದ ಒಂದು ಕೈಗನ್ನಡಿ. ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬಹುದಾದ ಮಾರ್ಗದರ್ಶಿ. ನೀವು ಹುಟ್ಟಿದ ವರ್ಷದೊಂದಿಗೆ ನೋಡಿ. ಪ್ರತಿ ಗುಂಪಿನಲ್ಲಿ ಎರಡು ಇಸವಿಗಳ ನಡುವೆ ಹನ್ನೆರಡು ವರ್ಷಗಳ ವ್ಯತ್ಯಾಸವಿದೆ. ಇಲ್ಲಿ ನೀವು ಹುಟ್ಟಿದ ಇಸವಿ ಇಲ್ಲದಿದ್ದರೂ ಕಂಡುಹುಡುಕುವುದು ಸುಲಭ.
( ಈ ಬರಹವನ್ನು ತರಂಗ, ಯುಗಾದಿ ವಿಶೇಷಾಂಕ 1986ರಿಂದ ಸಂಗ್ರಹಿಸಲಾಗಿದೆ)
1. ಹುಲಿ.
(1902 1914 1926 1938 1950 1962 1974 1986+ಮುಂದಿನ 12ನೇ ವರ್ಷ..)
ಇನ್ನೊಬ್ಬರ ತಪ್ಪು ಹುಡುಕುವುದರಲ್ಲಿ ಪ್ರವೀಣರು. ಕ್ರಾಂತಿಕಾರೀ ಗುಣ. ಎಲ್ಲೇ ಹೋಗಲಿ ನೀವೇ ಕೇಂದ್ರಬಿಂದುವಾಗಬೇಕೆಂಬ ಹಠ ನಿಮ್ಮದು. ಸುತ್ತಲಿನವರೂ ನಿಮ್ಮ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲಾಗದೆ ಹೇಳಿದ್ದಕ್ಕೆ ಜೀ ಹುಕುಂ ಎನ್ನುವವರೆ. ಎಲ್ಲರಿಂದಲೂ ಗೌರವ ಪಡೆಯುತ್ತಾ, ತನ್ನ ಕುದುರೆಗೆ ಮೂರೇ ಕಾಲು ಎಂದು ಸಾಧಿಸುತ್ತಾ, ಅಲ್ಲ ಎಂಬವರೊಡನೆ ಜಗಳ ಕಾಯುತ್ತಾ ಇರುವ ನಿಮಗೆ ತಡೆ ಹಾಕುವವರೇ ಇಲ್ಲ. ಮಹಾ ಒರಟರು. ಸಣ್ಣ ಸಣ್ಣ ವಿಷಯದಲ್ಲಿಯೂ ಸ್ವಾರ್ಥ ಪ್ರದರ್ಶಿಸುವ ನೀವು ಉದಾರಿಯಾದಿರೆಂದರೆ “ದೊಡ್ಡ ಉದಾರಿ”ಗಳ ಸಾಲಿಗೇ ಸೇರಿಬಿಡುವವರು. ಸಾಹಸಿ ಗುಣವೂ ನಿಮಗಿದೆ. ಸೈನ್ಯದ ಮುಖಂಡತ್ವಕ್ಕೆ ಹೇಳಿಸಿದವರು. ಮಹಿಳೆಯರೂ ಹೀಗೆಯೇ. ಎಲ್ಲದರಲ್ಲೂ ಮೊದಲಿಗರಾಗಬೇಕೆಂಬ ಉತ್ಕಟೇಚ್ಛೆ. ಪ್ರೀತಿಗಾಗಿ ಬಹಳ ಬಯಸುವ ವ್ಯಾಘ್ರ ಗುಂಪಿನನವರಿಗೆ ಜಯ ಸಿಗುವುದು ಮಾತ್ರ ವಿರಳ. ಹಗಲಿಗೆ ಹುಟ್ಟಿದವರದೇ ಒಂದು ಜಾಯಮಾನ. ರಾತ್ರಿ ಜನನವಾದವರ ಜಾಯಮಾನವೇ ಬೇರೆ. ದುಡ್ಡೆಂದರೆ ಅಷ್ಟು ಮೋಹವೇನೂ ನಿಮಗಿಲ್ಲ. ಆದರೆ ದುಡ್ಡು ಸಂಪಾದನೆಯ ಮಾರ್ಗದ ಬಗ್ಗೆ ನಿಮಗೆ ಯಾರೂ ಹೇಳಿಕೊಡುವ ಅಗತ್ಯವೇ ಇಲ್ಲ.! ಒಟ್ಟಾರೆ ಹೇಳುವುದಾದರೆ ಬಲು ರೋಮಾಂಚಕ ವ್ಯಕ್ತಿತ್ವ ನಿಮ್ಮದು. ಕುದುರೆ, ಡ್ರ್ಯಾಗನ್ ಮತ್ತು ನಾಯಿ ಗುಂಪಿನಲ್ಲಿ ಜನಿಸಿದವರು ನಿಮಗೆ ಒಳ್ಳೆಯ ಸಂಗಾತಿಯಾಗಬಲ್ಲರು. ಎಂದಿಗೂ ಮಂಗನ ಗುಂಪಿನವರು ಮಾತ್ರ ನಿಮಗೆ ಬೆಡ.
ಪ್ರಸಿದ್ಧರು:- ಮಾರ್ಕೊ ಪೋಲೋ, ಐಸೆನ್ ಹೋವರ್, ಕಾರ್ಲ್ ಮಾರ್ಕ್ಸ್, ಹೋ ಚಿ ಮಿನ್, ಮರ್ಲಿನ್ ಮನ್ರೋ, ನರೇಂದ್ರ ಮೋದಿ.

2. ಮೊಲ
( 1903 1915 1927 1939 1951 1963 1975 1987..)
ಅಭಿನಂದನೆ..! ವರಪುತ್ರರು ನೀವು..! ಭಾರೀ ಮಹತ್ವಾಕಾಂಕ್ಷಿಗಳು. ಆದರೇನು.! ಗಾಳಿಸುದ್ದಿಗಳಿಗೆ ಕಿವಿಗೊಡುವುದೆಂದರೆ ಎಲ್ಲಿಲ್ಲದ ತವಕ. ಪಟ್ಟಾಂಗಪ್ರಿಯರು. ಗಮ್ಮತ್ತಿನಲ್ಲಿರುವುದೆಂದರೆ ನಿಮಗೆ ಬಹಳ ಇಷ್ಟ. ಶಾಂತವಾಗಿ ಕಾಣುವ ನೀವು ಸುಲಭದಲ್ಲಿ ವಿಚಲಿತರಾಗುವವರಲ್ಲ. ಆದರೆ ಸ್ವಂತ ಸಮಸ್ಯೆಗಳೆಂದರೆ ತುಸು ತೀವ್ರವಾಗಿಯೇ ಕಳವಳಗೊಳ್ಳುತ್ತೀರಿ. ನೀವೆಷ್ಟೇ ಹೇಳಿದರೂ ಅಂತರಾಳದಿಂದ ಸನಾತನಿಗಳು. ಬಹಳ ಜಾಗರೂಕತೆಯಿಂದ ವ್ಯವಹರಿಸುವವರು. ಇನ್ನು ಈ ಗುಂಪಿನ ಮಹಿಳೆಯರೋ ಎಲ್ಲ ರಂಗದಲ್ಲಿಯೂ ಮುಂಚೂಣಿಯಲ್ಲಿರುವವರು. ಸದಭಿರುಚಿಯ ಬುದ್ಧಿವಂತೆಯರು ಮಾತ್ರವಲ್ಲ, ತಮ್ಮ ಜಾಣತನವನ್ನು ಸದಭಿರುಚಿಯನ್ನು ಇನ್ನೊಬ್ಬರೆದುರು ಪ್ರದರ್ಶಿಸುವ ಇಚ್ಛೆಯನ್ನೂ ತಡೆಯಲಾಗದವರು. ರಾಜಕೀಯ ನಾಯಕರ ಮಡದಿಯರಾಗಲು ಯುಕ್ತರಾದವರು. ಶ್ರೇಷ್ಠ ಅತಿಥೇಯರು. ನೀವು ವಾತ್ಸಲ್ಯಪೂರ್ಣ ವ್ಯಕ್ತಿತ್ವದವರಾಗಿದ್ದರೂ ಕುಟುಂಬದೊಳಗೆ ಮಾತ್ರ ಅಷ್ಟೇನೂ ಒಳ್ಳೆಯ ಸದಸ್ಯರಲ್ಲ..! ಅಂದರೆ ಮನೆಮಂದಿಗಿಂತ ಸ್ನೇಹಿತರೇ ನಿಮಗೆ ಹೆಚ್ಚು ಪ್ರಿಯ. ಹೋತದ ಗುಂಪಿನವರು ನಿಮಗೆ ಉತ್ತಮ ಸಂಗಾತಿ. ಎಂದಿಗೂ ಇಲಿಯ ಗುಂಪಿನವರನ್ನು ಮಾತ್ರ ವಿವಾಹವಾಗಬೇಡಿ.
ಪ್ರಸಿದ್ಧರು:- ಕನ್ಫ್ಯೂಶಿಯಸ್, ಅಗಾಥಾ ಕ್ರಿಸ್ತೀ, ಐನ್ಸ್ಟೈನ್, ಗರಿಬಾಲ್ಡಿ, ಸ್ವಾಮಿ ವಿವೇಕಾನಂದ, ಎಲ್ ಕೆ ಆಡ್ವಾಣಿ
3. ಚೀನೀ ಡ್ರ್ಯಾಗನ್.
( 1904 1916 1928 1940 1952 1964 1976 1988 )
ಕಟ್ಟುಮಸ್ತಾದ ವ್ಯಕ್ತಿತ್ವ. ನೇರ, ಸರಳ, ಎಲ್ಲ ಸರಿಯೆ. ಉಪಾಯದಿಂದ, ಮುತ್ಸದ್ದಿತನದಿಂದ ಕಾರ್ಯಸಾಧನೆ ಮಾಡುವುದು ಮಾತ್ರ ನಿಮಗೆ ಬಾರದು. ವದಂತಿಗಳಿಂದ ನೀವು ದೂರ ಇರುತ್ತೀರಿ. ಕಪಟನಾಟಕದವರೆಂದರೆ ಉರಿದುಬೀಳುತ್ತೀರಿ. ಭಾರೀ ಆದರ್ಶವಾದಿ. ಅಷ್ಟೇ ಅಲ್ಲ, ಎಲ್ಲದರಲ್ಲೂ ಪರಿಪೂರ್ಣತೆಯತ್ತವೇ ನಿಮ್ಮ ದೃಷ್ಟಿ. ನಿಮ್ಮ ಸುತ್ತಲಿನವರಿಂದ ಬಲು ಅಪೇಕ್ಷಿಸುತ್ತೀರಿ. ಮೂಗಿನ ತುದಿಯಮೇಲೆಯೇ ಸಿಟ್ಟು. ಆದರೆ ನೀವು ಬುದ್ಧಿವಂತರೂ ಹೌದು. ಕಲೆ, ಸೈನ್ಯ, ವೈದ್ಯಕೀಯ, ರಾಜಕೀಯ ರಂಗಗಳಲ್ಲಿ ನೀವು ಬಲುಬೇಗ ಮೇಲೇರುತ್ತೀರಿ. ಒಳ್ಳೆಯದಕ್ಕೇ ಇರಲಿ; ಕೆಟ್ಟದಕ್ಕೇ ಇರಲಿ. ನೀವು ಕೈ ಹಾಕಿದಿರೆಂದರೆ ಅದು ಸರಿಯಾಗಿ ನಡೆಯುವುದೇ ನಿಮ್ಮ ಗುರಿ. ಒಂದೇ ಪ್ರಮಾಣದ ಪರಿಶ್ರಮ, ಉಮೇದು. ನಿಮಗೆ ಸಂಗಾತಿಯಾಗುವವರು ಇಲಿಯ ಪಂಗಡದವರೆ ಅನುಕೂಲ. ಹಾವು, ಕೋಳಿ ಗುಂಪಿನವರಾದರೂ ಆದೀತು. ಆದರೆ ಮಂಗನ ಗುಂಪಿನವರು ಅತ್ಯಂತ ಸೂಕ್ತ ಸಂಗಾತಿಯಾಗಬಲ್ಲರು. ಹುಲಿ ಮತ್ತು ನಾಯಿ ಗುಂಪಿನವರು ಮಾತ್ರ ನಿಮಗೆ ಬೇಡ. ಅದೃಷ್ಟ, ಸಂಪತ್ತು, ಸಮತೋಲನ, ದೀರ್ಘಾಯುಷ್ಯ ಈ ಗುಂಪಿನವರ ಗರಿಮೆ.
ಪ್ರಸಿದ್ಧರು:- ಅಧ್ಯಕ್ಷ ಮಿತೆರಾ, ಜೋನ್ ಆಫ್ ಆರ್ಕ್, ಯೇಸುಕ್ರಿಸ್ತ, ಟಿಟೋ, ಬರ್ನಾರ್ಡ್ ಶಾ, ಪ್ಲೋರೆನ್ಸ್ ನೈಟಿಂಗೇಲ್.
4. ಹಾವು.
(1905 1917 1929 1941 1953 1965 1977 1989…)
ವಿವೇಕ, ದೂರದೃಷ್ಟಿ, ಸಜ್ಜನಿಕೆ, ರಸಿಕತೆಯಿಂದ ಕೂಡಿದ ವ್ಯಕ್ತಿತ್ವ ನಿಮ್ಮದು. ಸೋಮಾರಿ ಕಟ್ಟೆಯಿಂದಲೇ ನೀವು ಹರದಾರಿ ದೂರ. ಬುದ್ಧಿಜೀವಿಗಳೂ ವೇದಾಂತಿಗಳೂ ಆಗಿರುವ ನಿಮಗೆ ಹುಡಿ ಪಟ್ಟಾಂಗ ಒಪ್ಪುವುದೂ ಇಲ್ಲವೆನ್ನಿ. ಒಳ್ಳೊಳ್ಳೆಯ ಉಡುಪು ಧರಿಸುವುದೆಂದರೆ ಪಂಚಪ್ರಾಣ. ಮುಂದಾಗುದನ್ನು ಇಂದೇ ಊಹಿಸಬಲ್ಲಿರಿ. ಆರನೆಯ ಇಂದ್ರಿಯವಿದೆ ಎಂಬಷ್ಟು ಚುರುಕು ಮಿದುಳು ನಿಮ್ಮದು. ಕೈಗೆತ್ತಿಕೊಂಡ ಕೆಲಸವನ್ನು ಅರ್ಧದಲ್ಲಿ ಎಂದೂ ಕೈಬಿಡುವವರಲ್ಲ. ಕೊನೆಗದು ಕೆಟ್ಟದಾಗಿ ಅಂತ್ಯಗೊಂಡರೂ ಸರಿಯೆ. ನೀವು ಪೂರ್ಣಗೊಳಿಸಿಯೇ ಬಿಡುವವರು. ಇನ್ನು ನಿಮ್ಮ ಕಾರ್ಯವೈಖರಿಯೋ ಮಿಂಚಿನಂತೆ. ಅಷ್ಟೇ ದೃಢತೆಯಿಂದ ಕೂಡಿದ್ದು.
ದುಡ್ಡಿನ ವಿಷಯದಲ್ಲಂತೂ ಯಾವತ್ತೂ ನಿಮಗೆ ಚಿಂತೆ ಕಾಡಿದ್ದಿಲ್ಲ. ಅಗತ್ಯ ಬಿದ್ದಾಗೆಲ್ಲ ಎಲ್ಲಿಂದಾದರೂ ದುಡ್ಡು ತರುವ ಚಾಕಚಕ್ಯತೆ ನಿಮಗೆ ಕರಗತ. ಕೋಣ ಗುಂಪಿನವರು ನಿಮಗೆ ಉತ್ತಮ ಸಂಗಾತಿಯಾಗಬಲ್ಲರು. ಕೋಳಿ ಗುಂಪಿನವರಾದರೂ ಅಡ್ಡಿ ಇಲ್ಲ. ಆದರೆ ನೆನಪಿರಲಿ, ಹಂದಿ ಗುಂಪಿನವರು ನಿಮಗೆ ಸಲ್ಲ. ಹುಲಿ ಗುಂಪಿನವರಂತೂ ಎಂದಿಗೂ ಬೇಡ.
ಪ್ರಸಿದ್ಧರು:- ಜಾಕಿಲಿನ್ ಕೆನಡಿ, ಜಾನ್ ಎಫ್ ಕೆನಡಿ, ಪಿಕಾಸೋ, ಅಲೆಗ್ಸಾಂಡರ್ ಫ್ಲೆಮಿಂಗ್, ಮಾವೋ ತ್ಸೆ ತುಂಗ್, ಗಾಂಧೀಜಿ, ಇಂದಿರಾ ಗಾಂಧಿ
5. ಕುದುರೆ
( 1906 1918 1930 1942 1954 1966 1978 1990 2002..)
ಹರಿತಮತಿಯ ನೀವು ನೋಡಲು ಭಯ ಹುಟ್ಟಿಸುವಂಥ ವ್ಯಕ್ತಿತ್ವದವರು. ಚಂದದ ಉಡುಗೆ ತೊಡುಗೆ ನಿಮ್ಮ ವೈಶಿಷ್ಟ್ಯ. ಪ್ರಣಯಕೇಳಿಯ ಉಮೇದು ಎಂದೂ ಕಳಕೊಳ್ಳದವರು. ಆಟ ವಿನೋದದಲ್ಲಿಯೂ ನಿಮಗೆ ಆಸಕ್ತಿ ಇದೆ. ಹರಟೆಯೇ..? ಮುಂದಾಗಿ ನೀವೇ ಕುಳಿತುಬಿಡುತ್ತೀರಿ. ಸಮೂಹ ಆಕರ್ಷಣೆಯ ಶಕ್ತಿ ನಿಮಗಿರುವುದರಿಂದ ರಾಜಕೀಯ ಬದುಕಿಗೆ ನೀವು ಲಾಯಕ್ಕಾದವರು. ವ್ಯಾವಹಾರಿಕ ಬುದ್ಧಿಯವರು ನೀವು. ಭಾವುಕತೆಯಿಂದ ತೊಳಲಾಡುವವರಲ್ಲ. ಕಾಲ ಬಂದರೆ ಕುತಂತ್ರಿಗಳೂ ಆಗಬಲ್ಲಿರಿ. ಸಣ್ಣ ಸಣ್ಣ ವಿಷಯಕ್ಕೂ ಸಿಟ್ಟಿನಿಂದ ನೆಗೆದು ಹಾರುವ ಗುಣ. ಅಸಹನೆಯ ಸಾಕಾರ ಮೂರ್ತಿ. ಸಿಟ್ಟು ಸೆಡ; ಎಲ್ಲಿಯೂ ಸಾವಧಾನದ ಚಿಂತನೆ ಕೇಳಬೇಡಿ. ಇದರಿಂದಾಗಿಯೇ ಒಳ್ಳೆಯ ಸ್ನೇಹಿತರನ್ನು ಕಳೆದುಕೊಂಡು ಒಬ್ಬಂಟಿಯಾಗಿ ಬಿಡುತ್ತೀರಿ..! ಎಲ್ಲಿದ್ದರೂ ನೀವೇ ಆಕರ್ಷಣೆಯ ಬಿಂದುವಾಗಬೇಕೆಂಬ ಆಸೆ ಬೇರೆ. ಮದುವೆಯಾದರೂ ಮನೆಯ ಆಡಳಿತ ಸೂತ್ರವೆಲ್ಲ ನಿಮ್ಮ ಕೈಯಲ್ಲೇ. ಆದರೆ ನಿಮ್ಮಂತೆ ಮೈಮುರಿದು ದುಡಿಯುವವರು ಎಲ್ಲಿದ್ದಾರೆ.! ಎಷ್ಟೇ ಕೆಲಸವಿರಲಿ, ಎಷ್ಟೇ ದುಡ್ಡಿನ ವ್ಯವಹಾರವಿರಲಿ, ನೀವು ಹಿಂಜರಿಯುವವರಲ್ಲ. ಸಂಗಾತಿಯಾಗಿ ಹೋತ, ಶ್ವಾನ ಅಥವಾ ಹುಲಿ ಗುಂಪಿನವರನ್ನೇ ಆರಿಸಿಕೊಳ್ಳಿ. ಇಲಿಯನ್ನಂತೂ ಸರ್ವಥಾ ಕೂಡದು.
ಪ್ರಸಿದ್ಧರು:- ಕ್ರುಶ್ಚೇವ್, ಲೂಯಿ ಪಾಶ್ಚರ್, ನ್ಯೂಟನ್.
6.ಹೋತ
( 1907 1919 1931 1943 1955 1967 1979 1991…)
ಪ್ರಕೃತಿ ಪ್ರಿಯರಾದ ನೀವು ಕಲಾತ್ಮಕ ವ್ಯಕ್ತಿತ್ವದವರು. ಮೋಹಕ ರೂಪಿನವರು. ಆದರೆ ನಿರಾಶಾವಾದಿಗಳು. ಭಾರೀ ಹಿಂಜರಿತದ ಸ್ವಭಾವ. ಯಾವಾಗ ಕಂಡರೂ ಉದ್ವೇಗ. ಇನ್ನೊಬ್ಬರ ಮನೆ ತೋಟದ ಹೂ ಚಂದ ಎನ್ನುವ ಜಾತಿ. ನಿಮ್ಮ ಮೇಲೆ ನಿಮಗೆ ಹಿಡಿತವಿಲ್ಲ. ದೂರು ಸ್ವಭಾವ. ಎಲ್ಲರೂ ತನ್ನನ್ನು ಗಮನಿಸಬೇಕೆಂಬ ಆಸೆ ಬೇರೆ.! ಆದರೆ ನಿಮ್ಮ ನಡೆನುಡಿಯ ಮುಂದೆ ಇನ್ನು ಯಾರು..! ತುಂಬ ಸಹೃದಯಿಗಳು. ದಾನ ಧರ್ಮಕ್ಕಾಗಿ ನಿಮ್ಮ ದುಡ್ಡಿನ ಚೀಲ ಖಾಲಿಯಾಗುತ್ತಲೇ ಇರುತ್ತದೆ. ಉತ್ತಮ ಕಲಾಕಾರರಾಗಿದ್ದರೂ ಕೂಡಾ ಮನೋಶಕ್ತಿ ಕಡಿಮೆ ಇರುವ ಕಾರಣ ಸದಾ ಇನ್ನೊಬ್ಬರ ಮಾರ್ಗದರ್ಶನ ನಿಮಗೆ ಬೇಕೇಬೇಕು. ಸುಮ್ಮನೇ ಬಿಟ್ಟರೆ ನೀವು ನಿಮ್ಮ ಯೋಗ್ಯತೆಯ ಪರಿವೆಯೇ ಇಲ್ಲದೇ ಸಮಯವನ್ನು ಸುಮ್ಮನೇ ಹಾಳುಗೆಡವಿ ಬಿಟ್ಟೀರಿ. ಹೆಂಗಸರಿಗೆ ಶ್ರೀಮಂತರನ್ನು ಮದುವೆಯಾಗಬೇಕೆಂಬ ಕನಸು. ಮೊಲದ ಗುಂಪಿನವರನ್ನೇ ಸಂಗಾತಿಯಾಗಿ ಆರಿಸಿಕೊಳ್ಳಿ. ಇಲ್ಲವೇ ಕುದುರೆ, ಹಂದಿ ಗುಂಪಿನವರಾದರೂ ಸರಿ. ಇನ್ನು ಯಾವ ಗುಂಪಿನವರೂ ನಿಮ್ಮೊಂದಿಗೆ ಹೊಂದಿಕೊಳ್ಳಲಾರು ಜೋಕೆ..!
ಪ್ರಸಿದ್ಧರು:- ಮುಸೋಲಿನಿ, ಥಾಮಸ್ ಎಡಿಸನ್, ಅಲೆಗ್ಸಾಂಡರ್ ಗ್ರಹಾಂಬೆಲ್, ಜೇನ್ ಆಸ್ಟಿನ್.
7. ಮಂಗ
( 1908 1920 1932 1944 1956 1968 1980 1992 2004…)
ತಂಟೆಕೋರ. ಮೇರೆ ಮೀರಿದ ಉತ್ಸಾಹ. ಚೇಷ್ಟೇಯೇ ಚೇಷ್ಟೆ. ಜನರೊಡನೆ ಬೆರೆಯುವ ಗುಣವೂ ನಿಮ್ಮದು.! ನಿಮ್ಮ ಸಂಪರ್ಕಕ್ಕೆ ಬಂದವರು ತುಂಬ ಆತ್ಮೀಯತೆ ಅನುಭವಿಸುತ್ತಾರೆ ನಿಜ. ಆದರೆ ಆ ಆತ್ಮೀಯತೆಯ ಆಯುಷ್ಯ ಮಾತ್ರ ದೀರ್ಘವಲ್ಲ. ಕಾರಣ ನಿಮ್ಮಲ್ಲಿರುವ ಅಹಂಕಾರಿ, ಸ್ವಾರ್ಥ ಗುಣ. ಉಳಿದವರೆಲ್ಲ ನಿಮಗಿಂತ ಕೀಳು ಎಂದೂ ಎಣಿಸುವ ಜಾಣರಯ್ಯಾ ನೀವು..! ಯಾರಿಗೆ ಏನು ಉಪಕಾರ ಮಾಡಲೂ ಸಿದ್ದರಿರುವ ನೀವು ಯಾರನ್ನೂ ನಂಬಲು ಸಿದ್ಧರಿಲ್ಲ..! ಜ್ಞಾನದ ದಾಹ ಬಹಳ ಇರುವವರು. ಪುಸ್ತಕ ಓದುವುದರಲ್ಲಿ ಮೈ ಮರೆಯುವವರು. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಕೆಲಸ ಮಾಡಿ ಮುಗಿಸುವ ಚುರುಕು ನಿಮ್ಮದು..! ಎಂಥಾ ಸಮಸ್ಯೆಗಳನ್ನೂ ಕ್ಷಣ ಮಾತ್ರದಲ್ಲಿ ಬಗೆಹರಿಸುವ ಅಪ್ರತಿಮರು. ಬೇಕಾದ್ದು ಪಡೆಯಬೇಕೆಂದರೆ ಸಾವಿರ ಸುಳ್ಳು ಹೇಳಲೂ ಸಿದ್ಧ. ಇನ್ನೊಬ್ಬರ ಕಣ್ಣಿಗೆ ಬೂದಿ ಎರಚಿ ಕಾರ್ಯ ಸಾಧಿಸಲೂ ಸೈ..! ನೀವು ಯಾವ ಉದ್ಯೋಗಕ್ಕೆ ಹೋದರೂ ಸೋಲೆಂಬುದಿಲ್ಲ. ಹೆಚ್ಚು ಸೂಕ್ತವೆಂದರೆ ರಾಜಕಾರಣ, ವ್ಯಾಪಾರ, ಕೈಗಾರಿಕೋದ್ಯಮ.
ನಿಮ್ಮ ಚುರುಕು ಕೇವಲ ಕೆಲಸ ಕಾರ್ಯಕ್ರಮಗಳಲ್ಲಿ ಮಾತ್ರ ಎಂದೆಣಿಸಬೇಡಿ. ಪ್ರೇಮಿಸುವುದರಲ್ಲಿಯೂ ಅವಸರ, ಪ್ರೇಮಿಸಿ ಕೈ ಬಿಡುವುದರಲ್ಲಿಯೂ ಅವಸರ..! ಉತ್ತಮ ಸಂಗಾತಿಯಾಗುವವರೆಂದರೆ ಡ್ರ್ಯಾಗನ್ ಗುಂಪಿನವರು. ಇಲಿ ಗುಂಪಿನವರಾದರೂ ಸರಿಯೆ.
ಪ್ರಸಿದ್ಧರು:- ಜೂಲಿಯಸ್ ಸೀಜರ್, ಲಿಯೋನಾರ್ಡೋ ಡಾ ವಿನ್ಸಿ, ಬೈರನ್, ಎಲಿಜಬೆತ್ ಟೇಲರ್, ಅಲೆಗ್ಸಾಂಡರ್ ಡ್ಯುಮಾಸ್, ಮನಮೋಹನ ಸಿಂಗ್, ರಾಜೀವ್ ಗಾಂಧಿ…
8. ಕೋಳಿ
( 1909 1921 1933 1945 1957 1969 1981 1993 2005…)
ಬಿಚ್ಚು ಮನಸ್ಸಿನ ಒರಟರು ನೀವು. ಸುತ್ತು ಬಳಸಿ ಮಾತನಾಡುವ ವೈಖರಿ ಒಗ್ಗದು. ಇನ್ನೊಬ್ಬರಿಗೆ ಬೇಸರವಾಗುತ್ತದೆಂದು ನೀವು ಎಣಿಸುವವರೇ ಅಲ್ಲ. ತನ್ನನ್ನು ಎಲ್ಲರೂ ಗಮನಿಸಬೇಕೆಂಬ ಒಳ ಆಸೆ ಇರುವ ನೀವು ಅಂತರಂಗದಲ್ಲಿ ಸನಾತನಿಗಳು. ಆಕಾಶಗೋಪುರದಲ್ಲೇ ವಾಸಿಸುತ್ತ ಕನಸು ಕಾಣುತ್ತಿರುತ್ತೀರಿ. ಧೈರ್ಯ ಸಾಹಸಗಳಿಗೆ ಹೆಸರಾದವರೂ ಕೂಡಾ. ವಾಸ್ತವವಾಗಿ ಇರುವುದಕ್ಕಿಂತ ಹೆಚ್ಚಿಗೆ ಕೊಚ್ಚಿ ಇಳಿಸುತ್ತೀರಿ. ದುಡ್ಡಿನ ವಿಷಯದಲ್ಲಿ ನಿಮ್ಮ ಕತೆ ಸ್ವಾರಸ್ಯದ್ದಲ್ಲ. ದುಡಿಯಬೇಕು ತಿನ್ನಬೇಕು. ಉಳಿಸಲು ಬರುವುದಿಲ್ಲ. ಹಗಲುಗನಸಿನ ಒಡೆಯರಾದ ನೀವು ಆ ಕಾರಣದಿಂದಾಗಿ ತುಸು ಸೋಮಾರಿತನವನ್ನೂ ಮೈಗೂಡಿಸಿಕೊಳ್ಳುತ್ತೀರಿ. ಬೇಸಾಯಕ್ಕೆ ಹೇಳಿಸಿದವರು. ಈ ಗುಂಪಿನ ಗಂಡಸರು ಹೆಂಗಸರ ನಡುವೆಯೇ ಇರಲು ತುಂಬ ಇಷ್ಟಪಡುತ್ತಾರೆ. ಹೆಂಗಸರೂ ಹೆಂಗಸರ ಜೊತೆ ಪಟ್ಟಾಂಗವನ್ನು ಬಯಸುತ್ತಾರೆ.
ಪ್ರೀತಿಸುವುದರಲ್ಲಿ ನೀವೂ ಏನೂ ಕಡಿಮೆಯಿಲ್ಲ. ಆದರೇನು ಮಾಡುವುದು ಪಾಪ. ಹುಟ್ಟಾ ಕನಸುಗಾರರಾದ ನೀವು ಆಗಾಗ ಪ್ರೇಮಿಯನ್ನು ನಿರಾಸೆಗೊಳಿಸುತ್ತಲೇ ಇರುತ್ತೀರಿ. ವಾಸ್ತವ ಕನಸಿಗಿಂತ ತುಂಬ ಬೇರೆಯಾಗಿರುತ್ತದೆ ಎಂದು ಇನ್ನಾದರೂ ನಂಬಿ. ನಿಮಗೆ ಸರಿಯಾದ ಸಂಗಾತಿ ಇರುವುದು ಕೋಣನ ಗುಂಪಿನಲ್ಲಿ. ಹಾವಿನ ಪಂಗಡದವರಾದರೂ ಆದೀತು. ಕೊನೆಗೆ ಡ್ರ್ಯಾಗನ್ ಆದರೂ ಅಡ್ಡಿಯಿಲ್ಲ. ಮೊಲ ಮಾತ್ರ ಹೊರಗೇ ಇರಲಿ. ಸಲ್ಲವೇ ಸಲ್ಲ.
ಪ್ರಸಿದ್ಧರು:- ಡಿ ಎಚ್ ಲಾರೆನ್ಸ್, ಕಿಪ್ಲಿಂಗ್, ವಿಲಿಯಂ ಫಾಕ್ನರ್.
9. ನಾಯಿ.
(1910 1922 1934 1946 1958 1970 1982 1994 2006…)
ಆಹಾ..!! ಅಂತರ್ಮುಖಿಗಳಯ್ಯಾ ನೀವು. ಅನಾವಶ್ಯಕವಾಗಿ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳುವ ಜಾಯಮಾನವೇ ಅಲ್ಲ ನಿಮ್ಮದು. ತುಸು ನಿರಾಶಾವಾದಿಗಳು ಕೂಡಾ ಆಗಿದ್ದೀರಿ, ಹೌದೇ.? ಗುಂಪು ಗುಳಿಯೆಂದರೆ ಭಾರೀ ದೂರ ಇಡುತ್ತೀರಿ. ನಿಮ್ಮ ಯೋಧ ಗುಣಕ್ಕೆ ಬೆಲೆ ಕಟ್ಟುವವರಾರು..? ನಿಮ್ಮ ವಿಧೇಯತೆ, ಪ್ರಾಮಾಣಿಕತೆಗಳಿಗೆ ಸಾಟಿಯುಂಟೇ..! ಕೊಟ್ಟ ಮಾತನ್ನು ತಪ್ಪದ ಹರಿಶ್ಚಂದ್ರ ದೊರೆಗಳೇ ನೀವು. ಸಮಸ್ಯೆಗಳು ಬಂದರೂ ನಿಮ್ಮ ಬಳಿ ಧಾರಾಳವಾಗಿ ತೋಡಿಕೊಂಡು ಹಗುರಾಗಬಹುದು. ನಿಮ್ಮಿಂದ ಅದು ಎಲ್ಲಿಗೂ ಹೋಗುವುದಿಲ್ಲವೆಂದು ಖಾತರಿ..! ನ್ಯಾಯವಂತರು ನೀವು. ನ್ಯಾಯಕ್ಕಾಗಿ ಎಷ್ಟು ಹೋರಾಡಲೂ ತಯಾರು.! ಪರರ ಕಷ್ಟ ಕಂಡರೆ ಪ್ರಾಮಾಣಿಕವಾಗಿ ಮಿಡಿಯುತ್ತೀರಿ.
ದುಡ್ಡಿನ ಬಗ್ಗೆ ತಲೆ ಕೆಡಿಸಿಕೊಂಡವರೇ ಅಲ್ಲ. ಇದ್ದರೆ ಖರ್ಚು ಮಾಡುತ್ತೀರಿ, ಇಲ್ಲವೇ ಸುಮ್ಮನೇ ಕುಳಿತುಬಿಟ್ಟೀರಿ. ಹಣದ ಹೊಳೆಯಲ್ಲಿಯೇ ತೇಲುತಿದ್ದರೂ ನಿಮ್ಮ ಬೇಕುಗಳು ಬಹಳ ವಿರಳ.
ಉದ್ಯೋಗದ ಕುರಿತು ಹೇಳಬೇಕೆಂದರೆ ವ್ಯಾಪಾರ ನಿಮಗೆ ಸೂಕ್ತ. ಕಾರ್ಮಿಕ ನೇತಾರನಾಗಲು ಯೋಗ್ಯ. ವಿದ್ಯಾ ಕ್ಷೇತ್ರವೂ ಒಪ್ಪುವಂತಹುದೇ. ನೀವು ಮನಸ್ಸು ಮಾಡಿದರೆ ಸಂತರಾಗಲೂ ಸಾಧ್ಯ. ಸಂಗಾತಿಯಾಗಿ ನೀವು ಕುದುರೆ ಗುಂಪಿನವರನ್ನು ಆರಿಸಿಕೊಳ್ಳುವುದು ಕ್ಷೇಮ. ಹುಲಿ ಗುಂಪಿನವರನ್ನು ಮದುವೆ ಆದಿರೆಂದರೆ ದಿನಾ ಕಾದಾಟದ ಕೂಳು.
ಪ್ರಸಿದ್ಧರು:- ವಾಲ್ಟೇರ್, ಸಾಕ್ರೆಟೀಸ್, ಯೂರಿ ಗಾಗರಿನ್, ಬೆಂಜಮಿನ್ ಫ್ರಾಂಕ್ಲಿನ್, ಸೋನಿಯಾ ಗಾಂಧಿ, ಸಂಜಯ ಗಾಂಧಿ..
10. ಹಂದಿ.
( 1911 1923 1935 947 1959 1971 1983 1995 2007…)
ನಂಬಬೇಕೆಂದರೆ ನಂಬಬೇಕು ನಿಮ್ಮನ್ನು. ನಿಮ್ಮೊಡನೆ ಹೇಳಿದ ಒಂದು ಮಾತೂ ಆಚೆ ಈಚೆಗೆ ಹೋಗಲಾರದು. ಪೆಟ್ಟಿಗೆಯಲ್ಲಿಟ್ಟು ಬೀಗ ಜಡಿದಂತೆ ಜೋಪಾನ. ಮುಗ್ಧರಾದರೂ ನೀವು ಆತ್ಮವಿಶ್ವಾಸ ಉಳ್ಳವರು. ನಿಮಗೆ ನೀವೇ ರಕ್ಷಕರು. ರಕ್ಷಣೆಗೆ ಇನ್ನು ಬೇರೆ ಯಾರಿಲ್ಲ. ನೀವು ನಂಬಿದವರನ್ನು ತುಂಬ ಸಹನೆಯಿಂದ ನೋಡುತ್ತೀರಿ. ಮೋಸ ಹೋದರೂ ಸರಿಯೆ, ಒಪ್ಪಿಕೊಂಡು ನಿಮ್ಮ ತಪ್ಪುಗಳನ್ನೇ ಹುಡುಕಲು ತೊಡಗುತ್ತೀರಿ. ನೀವು ಬುದ್ಧಿವಂತರೇನೋ ಹೌದು. ಆದರೆ ಪ್ರೇಮಿಗಳ ವಿಷಯದಲ್ಲಿ ನೀವು ಮಹಾ ದಡ್ಡರು. ದುಡ್ಡು ವ್ಯವಹಾರ ನಿಮ್ಮಿಂದಾಗದು. ನಿಮ್ಮ ಸಂಗ ಮಾತ್ರ ಬಲು ಅಪ್ಯಾಯಮಾನ. ಮೋಜು ಮೇಜವಾನಿ ಕೂಟಗಳಲ್ಲಿ ನಿಮ್ಮ ಹೆಸರು ಮಾತ್ರ ಮೊದಲು ಬರುತ್ತದೆ. ಮಾತು ಉದುರಿಸಿ ಕಳೆಯುವವರಲ್ಲ. ನಿಮ್ಮ ಜ್ಞಾನದ ಹಸಿವು, ಬಾಯಾರಿಕೆ ತಣಿಯುವಂಥದೇ ಅಲ್ಲ.
ಪೂರಾ ಲೌಕಿಕವಾದಿಯಾಗಿ ಕಾಣುತ್ತೀರಿ. ಮೃದು ಭಾವದ ಹಿಂದೆ ಬಹಳ ಪ್ರಬಲವಾದ ಆತ್ಮಶಕ್ತಿ ಇರುವಂಥವರು ನೀವು. ಯಾವ ಕೆಲಸಕ್ಕೇ ಹೋಗಲಿ, ಜಯ ಕಟ್ಟಿಟ್ಟದ್ದು. ಕಷ್ಟಪಟ್ಟು ದುಡಿಯುವ ಜಾಯಮಾನ ನಿಮ್ಮದು. ಎಂದಿಗೂ ಹಿತ್ತಾಳೆ ಕಿವಿಯವರಲ್ಲ. ಈ ಗುಂಪಿನ ಮಹಿಳೆಯರು ಒಳ್ಳೆಯ ತಾಯಂದಿರು. ಮೊಲದ ಗುಂಪಿನವರನ್ನೇ ಸಂಗಾತಿಯಾಗಿ ಆರಿಸಿಕೊಳ್ಳಿ. ಹಾವು ಮತ್ತು ಹೋತ ಗುಂಪಿನವರು ಬೇಡ.
ಪ್ರಸಿದ್ಧರು:- ಆರ್ನೆಸ್ಟ್ ಹೆಮಿಂಗ್ವೇ, ಬಿಸ್ಮಾರ್ಕ್, ಒಲಿವರ್ ಕಾಮ್ವೆಲ್, ಅಬ್ದುಲ್ ಕಲಾಂ…
11. ಇಲಿ
(1900 1912 1924 1936 1948 1960 1972 1984 1996…)
ಮೋಹಕತೆಯೆಂದರೆ ಈ ಗುಂಪಿನವರದು. ಹಾಗೆಯೇ ಆಕ್ರಮಣಶೀಲ ವ್ಯಕ್ತಿತ್ತವೂ ಸಹ. ನೋಡಲೇನೋ ನೀವು ಬಲು ಶಾಂತರಾಗಿ, ಖುಷಿಯಲ್ಲಿರುವಂತೆ ಕಾಣುತ್ತೀರಿ. ಆದರೆ ಒಳ ಮಾತೇ ಬೇರೆ. ಈ ಶಾಂತತೆಯ ಪದರದ ಕೆಳಗೆ ಭಾರೀ ಸಿಟ್ಟಿನ ಜ್ವಾಲಾಮುಖಿ ಇದೆ. ವಿಶ್ರಾಂತಿಯರಿಯದ ಚೇತನವಿದೆ. ಕೂಟಪ್ರಿಯರಾದ ನೀವು ಹರಟೆ, ಗಾಳಿಮಾತುಗಳನ್ನು ಚಪ್ಪರಿಸಿ ಕೇಳುತ್ತೀರಿ. ಅಷ್ಟೇ ಅಲ್ಲ, ಹೌಹಾರುವಂಥ ಪ್ರಸಂಗ ಸೃಷ್ಟಿಸಿ ಸಂತೋಷ ಪಡುವುದೆಂದರೆ ಎಲ್ಲಿಲ್ಲದ ಉಮೇದು. ಅನುಕೂಲಸಿಂಧು ನಿಮ್ಮ ಸೂತ್ರ. ಒಟ್ಟಾರೆ ಊಹನೆಯಲ್ಲಿಯೇ ಗುಂಡು ಹೊಡೆದು ಬಿಡುತ್ತೀರಿ. ಸರಿಯೋ ತಪ್ಪೋ ಯೋಚನೆ ಇಲ್ಲ. ಅಪ್ಪ, ಅಮ್ಮ, ಸ್ನೇಹಿತರು, ಬಂಧುಗಳು ಯಾರೇ ಇರಲಿ, ಅವರಿಂದೇನಾದರೂ ನಿಮಗೆ ಲಾಭವಿದೆಯಾದರೆ ಮಾತ್ರ ಅವರ ಹಿಂದೆ ಇರುತ್ತೀರಿ. ಯಾವುದಾದರೂ ಕಾರ್ಯವನ್ನು ಕೈಗೊಂಡಿರೆಂದರೆ ಕೊನೆಗದು ದೊಡ್ಡ ಸೋಲೇ ಆಗಿರಲಿ; ತುದಿಮುಟ್ಟದೆ ಬಿಡುವವರಲ್ಲ. ಪ್ರೀತಿಸುವವರಿಗೆ ಏನು ಮಾಡಲೂ ಹಿಂಜರಿಯದ ಉದಾರಿಗಳು. ಈ ಗುಂಪಿನ ಹೆಂಗಸರು ಬೇಡದ್ದನ್ನೆಲ್ಲ ಸಂಗ್ರಹಿಸಿ ಇಡುವ ಚಟದವರು..! ಯಾವತ್ತಾದರೂ ಒಂದು ದಿನ ಪ್ರಯೋಜನಕ್ಕೆ ಬಂದೀತು ಎಂಬ ಗ್ರಹಿಕೆ ಇವರದು. ಉತ್ತಮ ಸಂಗಾತಿ ಎಂದರೆ ಡ್ರ್ಯಾಗನ್ ಗುಂಪಿನವರು. ಕೋಣನ ಗುಂಪಿನವರಾದರೂ ಸರಿ. ಕುದುರೆ ಗುಂಪಿನವರ ಸುದ್ದಿ ಮಾತ್ರ ನಿಮಗೆ ಬೇಡ.
ಪ್ರಸಿದ್ಧರು:- ಷೇಕ್ಸ್ಪಿಯರ್, ಲೂಯಿಸ್ ಆರ್ಮ್ ಸ್ಟ್ರಾಂಗ್, ವಿನ್ಸ್ಟನ್ ಚರ್ಚಿಲ್, ಪ್ರಿನ್ಸ್ ಚಾರ್ಲ್ಸ್, ಅಟಲ್ ಬಿಹಾರಿ ವಾಜಪೇಯಿ
12. ಕೋಣ.
( 1901 1913 1925 1937 1949 1961 1973 1985 1997 2009…)
ಸೌಮ್ಯ, ಕರಾರುವಾಕ್ಕಾದ ನಡವಳಿಕೆ. ಸ್ವಂತ ಹಾಗೂ ಬುದ್ಧಿವಂತ ಮನೋಪ್ರಕೃತಿ. ಇನ್ನೊಬ್ಬರಲ್ಲಿಯೂ ಆತ್ಮವಿಶ್ವಾಸವನ್ನು ಎಚ್ಚರಿಸುವಲ್ಲಿ ನೀವು ನಿಸ್ಸೀಮರು. ಏಕಾಕಿತನವನ್ನೂ ಇಷ್ಟಪಡುತ್ತೀರಿ. ಚಿಂತನಶೀಲ ಮನಸ್ಸು. ಕೆಲವೊಮ್ಮೆ ಭಾರೀ ನಿಂದೆಗೆ, ಟೀಕೆಗೆ ಗುರಿಯಾಗುವುದೂ ಉಂಟು.
ನೀವು ಶಾಂತ ವ್ಯಕ್ತಿತ್ವದವರೇನೋ ಹೌದು. ಆದರೆ ನಿಮಗೆ ಸಿಟ್ಟು ಬಂತೆಂದರೆ ಶುದ್ಧ ಒರಟರು. ಅಪಾಯಕಾರಿ. ಆಗ ನೀವಿದ್ದ ಜಾಗವನ್ನೇ ಉಳಿದವರು ಬಿಟ್ಟು ಓಡುವುದು ಲೇಸು.
ನೀವು ಆಧುನಿಕತೆಯ ಪ್ರಿಯರು. ಬದಲಾವಣೆಗಾಗಿ ಹಪಹಪಿಸುವವರು. ಮಿನಿಸ್ಕರ್ಟ್ ವಿಷಯವೇ, ಪಾಪ್ ಸಂಗೀತವೇ, ಮತ್ತೆ ಯಾವುದೇ ಹೊಸ ವಿಚಾರಗಳೇ- ನಿಮ್ಮಷ್ಟು ಮುಕ್ತವಾಗಿ ಸ್ವಾಗತಿಸುವವರು ಬೇರೆ ಇಲ್ಲ. ಕಷ್ಟಪಟ್ಟು ದುಡಿಯುವ ಕಲೆ ನಿಮಗಿದೆ. ಸಾರ್ವಜನಿಕ ಸೇವೆ ಇತ್ಯಾದಿ ಕಾರ್ಯ ನಿಮಗೆ ಹಿಡಿಸದು. ಸರ್ಜನ್ ಆಗಲು ಬಲು ಯೋಗ್ಯರು ನೀವು. ಈ ಗುಂಪಿನ ಮಹಿಳೆಯರಿಗಂತೂ ಮನೆಯೊಳಗೆ ಇರುವುದೆಂದರೆ ಬಲು ಪ್ರೀತಿ.
ನೀವು ಬಲು ಕುಟುಂಬ ಪ್ರಿಯರು. ಕುಟುಂಬಕ್ಕಾಗಿ ಏನು ತ್ಯಾಗ ಮಾಡಲಿಕ್ಕೂ ತಯಾರಿರುವವರು. ಆದರೆ ಉಳಿದವರೆಲ್ಲರೂ ವಿಧೇಯರಾಗಿದ್ದಷ್ಟೂ ಸಾಲದು ಎಂಬ ಗುಣ.
ಸುಕೋಮಲ ಮನದವರಾದರೂ ಪ್ರಣಯ ಪ್ರಕರಣಗಳಲ್ಲಿ ಆಸಕ್ತಿ ಇಲ್ಲ. ನಿಮಗೆ ಪರಿಪೂರ್ಣ ಜೋಡಿಯೆಂದರೆ ಕೋಳಿ ಗುಂಪಿನವರು. ಮಂಗನ ಗುಂಪಿನವರೆಂದರೆ ತುಸು ಹೆಚ್ಚಿನ ವಾಂಛೆ ನಿಮಗೆ. ಇಲಿ ಗುಂಪಿನವರೂ ನಿಮಗೆ ಪರವಾಗಿಲ್ಲ.
ಪ್ರಸಿದ್ಧರು:- ನೆಪೋಲಿಯನ್, ಹಿಟ್ಲರ್, ಚಾರ್ಲಿ ಚಾಪ್ಲಿನ್, ಸಚಿನ್ ತೆಂಡೂಲ್ಕರ್

Leave a Reply