ಶ್ರೀ ಶಂಕರ ಜಯಂತಿ

ಶ್ರೀ ಶಂಕರ ಜಯಂತಿ – ವಿಶ್ವ ತತ್ವಜ್ಞಾನಿಗಳ ದಿನ
ಶ್ರೀ ಶಂಕರರ ಜೀವನದ ಮೈಲಿಗಲ್ಲುಗಳು – ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿದ ಶಂಕರರು ಅನೇಕರನ್ನು ಅಧ್ಯಾತ್ಮಕ್ಕೆ ಸಂಬಂಧಪಟ್ಟ ವಾದದಲ್ಲಿ ಸೋಲಿಸಿದರು.ಇವುಗಳಲ್ಲಿ ಮಂಡನಮಿಶ್ರರನ್ನು ವಾದದಲ್ಲಿ ಸೋಲಿಸಿದ ಘಟನೆ ಬಹು ಪ್ರಮುಖವಾದುದು. ಮಂಡನ ಮಿಶ್ರರೇ ನಂತರ ಶ್ರೀ ಸುರೇಶ್ವರಾಚಾಯ೯ ಎಂಬ ಹೆಸರಿನಿಂದ ಪ್ರಸಿದ್ಧರಾದ ಶಿಷ್ಯರಾದರು.ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠ (ಮಠ) ಗಳನ್ನು ಸ್ಥಾಪಿಸಿ, ಪ್ರತಿಯೊಂದು ಪೀಠಕ್ಕೂ ತಮ್ಮ ಒಬ್ಬೊಬ್ಬ ಶಿಷ್ಯರನ್ನು ಪೀಠಾಧಿಪತಿಯನ್ನಾಗಿಸಿದರು.”ಅದ್ವೈತ” ಸಿದ್ಧಾಂತವನ್ನು ಜನಪ್ರಿಯಗೊಳಿಸಿದರು.ಹಲವಾರು ಪಂಡಿತರನ್ನೂ ಶಾಸ್ತ್ರವೇತ್ತರನ್ನೂ ಜಯಿಸಿ, ಸರ್ವಜ್ಞಪೀಠವನ್ನೇರಿದರು. ಭಾರತದ ದಕ್ಷಿಣದಲ್ಲಿ ವಾದಮಾಡಿ ತಮ್ಮನ್ನು ಜಯಿಸುವವರೇ ಇಲ್ಲವೆಂದು ಹೀಗಳೆದು ಶಾರದೆಯ ದೇಗುಲದ ದಕ್ಷಿಣದ ಬಾಗಿಲನ್ನು ಮುಚ್ಚಿಸಿದ್ದ ಕಾಶ್ಮೀರದ ಪಂಡಿತರ ಬಾಯಿ ಮುಚ್ಚಿಸಿದರು;
ಶ್ರೀ ಶಂಕರರು ಸ್ಥಾಪಿಸಿದ ನಾಲ್ಕು ಪೀಠಗಳು –
ಉತ್ತರದಲ್ಲಿ: ಬದರಿ ಪೀಠ – ಉತ್ತರಾಮ್ನಾಯ ಜ್ಯೋತಿರ್ ಮಠ
ದಕ್ಷಿಣದಲ್ಲಿ: ಶೃಂಗೇರಿ ಪೀಠ – ದಕ್ಷಿಣಾಮ್ನಾಯ ಶಾರದಾ ಮಠ
ಪೂರ್ವದಲ್ಲಿ: ಪುರಿ ಪೀಠ – ಪೂರ್ವಾಮ್ನಾಯ ಗೋವರ್ಧನ ಮಠ
ಪಶ್ಚಿಮದಲ್ಲಿ ದ್ವಾರಕಾ ಪೀಠ – ಪಶ್ಚಿಮಾಮ್ನಾಯ ಮಠ
ಈ ನಾಲ್ಕೂ ಮಠಗಳು ಇಂದಿಗೂ ತಮ್ಮ ಗುರು ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದು ಅಸಂಖ್ಯಾತ ಮಂದಿ ಅನುಯಾಯಿಗಳನ್ನು ಹೊಂದಿವೆ.ಶಂಕರರು ಬಾದರಾಯಣರ “ಬ್ರಹ್ಮಸೂತ್ರ” (ವೇದಾಂತಸೂತ್ರ)ಗಳಿಗೆ ಭಾಷ್ಯವನ್ನು ರಚಿಸಿದರು. ಉಪನಿಷತ್ತುಗಳಿಗೆ ವ್ಯಾಖ್ಯಾನ ನೀಡಿದರು; ಅಲ್ಲದೆ ಶ್ರೀಮದ್ಭಗವದ್ಗೀತೆಗೆ ಭಾಷ್ಯವನ್ನು ಬರೆದು ಪ್ರಸ್ಥಾನತ್ರಯಗಳನ್ನು ಪೂರ್ಣಗೊಳಿಸಿದರು. ಇವರು ರಚಿಸಿದ “ಭಜ ಗೋವಿಂದಮ್” ಸ್ತೋತ್ರ ಅತ್ಯಂತ ಪ್ರಸಿದ್ಧವಾದುದು. ಹಲವಾರು ಇತರ ಸ್ತೋತ್ರಗಳನ್ನೂ ಶಂಕರರು ರಚಿಸಿದ್ದಾರೆ ತಾಯಿಗೆ ಕೊಟ್ಟ ಮಾತಿನ ಪ್ರಕಾರ ಆಕೆಯ ಕೊನೆಗಾಲದಲ್ಲಿ ಕಾಲಟಿಗೆ ಹಿಂದಿರುಗಿದ ಶಂಕರರು ಆಕೆಯ ಅಂತಿಮ ವಿಧಿಗಳನ್ನು ಪೂರೈಸಿದರು.
“ಅದ್ವೈತ” ಸಿದ್ಧಾಂತ – ಸಂಸ್ಕೃತದಲ್ಲಿ “ದ್ವಿ” ಎಂದರೆ ಎರಡು ಎಂದರ್ಥ. ಹಾಗಾಗಿ “ಅ” + “ದ್ವೈತ” ಅಂದರೆ “ಎರಡಲ್ಲದ್ದು” ಎಂದು ಅರ್ಥೈಸಬಹುದು. ಅದ್ವೈತಸಿಧ್ಧಾಂತದ ಮೂಲ ಸಾರವೇ ಇದು. “ಆತ್ಮ” ಮತ್ತು “ಪರಮಾತ್ಮ” ಎಂಬುದು ಎರಡು ಬೇರೆ ಬೇರೆ ಅಂಶಗಳಲ್ಲ. ಇರುವುದು ಒಂದೇ. ಆತ್ಮನೇ ಪರಮಾತ್ಮ (ದೇವರು). ಪರಮಾತ್ಮನೇ ಆತ್ಮ. “ಅಹಂ ಬ್ರಹ್ಮಾಸ್ಮಿ” (ನನ್ನೊಳಿರುವ ಆತ್ಮವೇ ಪರಂಬ್ರಹ್ಮ), “ತತ್ ತ್ವಮ್ ಅಸಿ” (ನೀನು ಅದೇ ಆತ್ಮದಿಂದ ಆಗಿರುವೆ) ಎಂಬುದು ಅದ್ವೈತ ತತ್ವದ ಮೂಲ ಮಂತ್ರ. ಇದಲ್ಲದೇ ಆದಿ ಶಂಕರಾಚಾರ್ಯರು ಪರಮಾತ್ಮ, ಅಂದರೆ “ಆತ್ಮ”, ಅದು ಮಾತ್ರ ಸತ್ಯ; ಈ ಜಗತ್ತಿನಲ್ಲಿ ಮಿಕ್ಕೆಲ್ಲವೂ ಮಿಥ್ಯ ಹಾಗೂ “ಸರ್ವಂ ಬ್ರಹ್ಮಮಯಂ ಜಗತ್” (ಈ ಜಗತ್ತಿನಲ್ಲಿ ಎಲ್ಲವೂ ಪರಮಾತ್ಮನಿಂದಲೇ ಆವರಿಸಲ್ಪಟ್ಟಿದೆ) ಎಂಬುದಾಗಿ ಜಗತ್ತಿಗೆ ಸಾರಿದರು.
ಉಪಭೋಗ-ಆಯುಷ್ಯ – ಜಾಗತೀಕರಣದ ನೆರವಿನಿಂದ ನಮ್ಮ ಉಪಭೋಗ ಸಂಸ್ಕೃತಿಯು ವರ್ಧಿಸುತ್ತಿದೆಯಷ್ಟೆ. ಅದೇವೇಳೆ, ನಮ್ಮ ಆಯುಷ್ಯ ಕ್ಷಯಿಸುತ್ತಲೇ ಇದೆ. ಉಪಭೋಗಗಳ ಅನುಭವಕ್ಕಾಗಿಯೇ ನಮ್ಮ ಸಂಪೂರ್ಣ ಜೀವನವನ್ನು ವ್ಯಯಿಸಿಬಿಡುತ್ತೇವಲ್ಲಾ, ಜೀವನದ ಅರ್ಥ, ಉದ್ದೇಶ ಇಷ್ಟೇಯೇ?
“ದಿನಮಪಿ ರಜನೀ ಸಾಯಂ ಪ್ರಾತಃ ಶಿಶಿರವಸಂತೌ ಪುನರಾಯಾತಃ ಕಾಲಃ ಕ್ರೀಡತಿ ಗಚ್ಛತ್ಯಾಯುಃ ತದಪಿ ನ ಮುಂಚತ್ಯಾಶಾವಾಯುಃ” (“ಚರ್ಪಟ ಪಂಜರಿಕಾ”) ”
ಹಗಲು-ರಾತ್ರಿ, ಸಂಜೆ-ಬೆಳಗು, ಚಳಿಗಾಲ-ವಸಂತಕಾಲ ಇವೆಲ್ಲ ಪುನಃಪುನಃ ಬರುತ್ತ ಹೋಗುತ್ತ ಇರುತ್ತವೆ. ಇದು ಕಾಲನ ಆಟ. ಪರಿಣಾಮ, ನಮ್ಮ ಆಯುಷ್ಯದ ಕ್ಷಯ. ಆದರೆ, ಆಯುಷ್ಯ ಕುಂದುತ್ತಿದ್ದರೂ ಆಶೆ ಮಾತ್ರ ಬೆಳೆಯುತ್ತಲೇ ಇರುತ್ತದಲ್ಲ!”
ಈ ಆಶೆಯ ಬೆಂಬತ್ತಿ, ಉಪಭೋಗವನ್ನೇ ಆನಂದವೆಂದು ಭ್ರಮಿಸಿ, ಜೀವನವನ್ನು ಅರಿಯಲಾರದವರಾಗಿ, ಕೊನೆಗೊಮ್ಮೆ ಭ್ರಮನಿರಸನ ಹೊಂದಿ, ಅಷ್ಟರಲ್ಲಿ ಕಾಲ ಮಿಂಚಿಹೋಗಿರುವುದರಿಂದಾಗಿ ಬಾಳನ್ನು ವ್ಯರ್ಥಮಾಡಿಕೊಳ್ಳ
ುತ್ತೇವಲ್ಲಾ, ಅದರ ಬದಲು, ವೇದಾಂತವೆಂದು ನಾವು ಉಪೇಕ್ಷಿಸುವ ಜೀವನತತ್ತ್ವವನ್ನೊಂದಿಷ್ಟು ಅರಿಯಲು ಯತ್ನಿಸಬಾರದೇಕೆ?
ಶಿವೋಹಂ “ನ ಭೂಮಿರ್ನ ತೋಯಂ, ನತೇಜೋ ನ ವಾಯುರ್ ನ ಖಂ ನೇಂದ್ರಿಯಂ ವಾ, ನ ತೇಷಾಂ ಸಮೂಹಃ ಅನೈಕಾಂತಿಕತ್ವಾತ್ ಸುಷುಪ್ತೈಕ ಸಿದ್ಧಃ ತದೇಕೋವಶಿಷ್ಟಃ ಶಿವಃ ಕೇವಲೋಹಂ” (“ದಶಶ್ಲೋಕೀ”)
“ನಾನು ಭೂಮಿಯಲ್ಲ, ನೀರಲ್ಲ, ತೇಜಸ್ಸಲ್ಲ, ವಾಯುವಲ್ಲ, ಆಕಾಶವಲ್ಲ, ಇಂದ್ರಿಯವೂ ಅಲ್ಲ. ಇವೆಲ್ಲವುಗಳ ಸಮೂಹವೂ ನಾನಲ್ಲ. ಏಕೆಂದರೆ, ಇವುಗಳಿಗೆ ಏಕೀಭಾವ ಸ್ಥಿರವಾಗಿಲ್ಲ. ಆದ್ದರಿಂದ, ಗಾಢನಿದ್ರಾವಸ್ಥೆಯಲ್ಲಿ ಪ್ರತ್ಯೇಕವಾಗಿ ಇವುಗಳಿಂದಾಚೆ ಎದ್ದು ಉಳಿಯುವ ಶಿವ(ದೈವ)ತತ್ತ್ವವ
ೇ ನಾನು.” ಇಂಥದೊಂದು ಅರಿವನ್ನು ಬೆಳೆಸಿಕೊಂಡಾಗ ನಾವು ಹೊಂದುವ ಆನಂದ ಅದುವೇ ನಿಜವಾದ ಜೀವನಾನಂದ. ಅಂಥ ಆನಂದವು ನಮಗೆ ಉಪಭೋಗವಸ್ತುಗಳಿಂದ ದೊರಕಲು ಸಾಧ್ಯವೆ? ಜೀವನದ ಈ ಆನಂದಘಟ್ಟವನ್ನು ತಲುಪಿದ ಆದಿಶಂಕರರು ಹಿಮಾಲಯದಲ್ಲಿ ಲೀನವಾಗುವ ಮುನ್ನಾ ರಾತ್ರಿ ಈ ರೀತಿ ಹೇಳಿಕೊಳ್ಳುತ್ತಿದ್ದರು:
“ಮನೋಬುದ್ಧ್ಯಹಂಕಾರಚಿತ್ತಾನಿ ನಾಹಂ ನಚಶ್ರೋತ್ರಜಿಹ್ವೇನ ಚ ಘ್ರಾಣ ನೇತ್ರೇ ನಚ ವ್ಯೋಮ ಭೂಮಿರ್ನತೇಜೋನವಾಯುಃ ಚಿದಾನಂದರೂಪಃ ಶಿವೋಹಂ ಶಿವೋಹಂ” (“ನಿರ್ವಾಣ ಷಟ್ಕ”)
“ಅಂತಃಕರಣಗಳಾದ ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಇವು ನಾನಲ್ಲ. ಜ್ಞಾನೇಂದ್ರಿಯಗಳಾದ ಕಿವಿ, ನಾಲಗೆ, ಮೂಗು, ಕಣ್ಣು, ಚರ್ಮ ಇವು ನಾನಲ್ಲ. ಪಂಚಭೂತಗಳಾದ ಆಕಾಶ, ಭೂಮಿ, ತೇಜಸ್ಸು, ವಾಯು, ಜಲ ಇವು ನಾನಲ್ಲ. ಚಿದಾನಂದರೂಪನಾದ ಶಿವನೇ ನಾನು, ಶಿವನೇ ನಾನು, ಶಿವನೇ ನಾನು.”
ಇಂಥ ಜೀವನದೃಷ್ಟಿಯನ್ನು ರೂಢಿಸಿಕೊಂಡರೆ ನಮಗೆ ಈ ಜೀವಿತದಲ್ಲಿ ಮೋಹಜನ್ಯ ಕಳವಳವೆಂಬುದಿಲ್ಲ.
“ದುಃಖೇಷು ಅನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ” ಎಂಬ ಭಗವದ್ಗೀತೆಯ ನುಡಿಯಂತೆ ನಾವು ದುಃಖದ ಸಂದರ್ಭಗಳಲ್ಲಿ ಉದ್ವೇಗಕ್ಕೊಳಗಾಗದಿರಲು ಮತ್ತು ಸುಖದ ಸನ್ನಿವೇಶಗಳಲ್ಲಿ ನಿಷ್ಪೃಹರಾಗಿ ಮುನ್ನಡೆಯಲು ಸಾಧ್ಯ. ಇದಕ್ಕಿಂತ ಸೌಭಾಗ್ಯ ನಮಗೆ ಈ ಜೀವನದಲ್ಲಿ ಇನ್ನೊಂದುಂಟೆ?

 

Leave a Reply